ಬ್ಲೂ ವೇಲ್ ಇಂಟರ್ನೆಟ್ ಸೂಸೈಡ್ ಗೇಮ್ ಎಂದರೆ ನಮ್ಮಲ್ಲಿ ಅನೇಕರಿಗೆ ತಿಳಿದಿರಲಕ್ಕಿಲ್ಲ. ಆದರೆ ರಷ್ಯಾ ಹಾಗೂ ಐರೋಪ್ಯ ದೇಶಗಳಲ್ಲಿ ಅನೇಕ ಹದಿಹರೆಯದ ಮಕ್ಕಳ ಜೀವವನ್ನು ತಿಂದು ತೇಗುತ್ತಿರುವ ಈ ರಾಕ್ಷಸಿ ಆಟವು ಸದ್ಯದಲ್ಲೇ ಭಾರತಕ್ಕೆ ಕಾಲಿಡುವ ಮೂಲಕ ಭಾರತದ ಭವಿಷ್ಯವನ್ನು ನಿರ್ಮಿಸಬೇಕಾದ ಮಕ್ಕಳಿಗೆ ಮಾರಕವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ. 2013ರಲ್ಲಿ ರಷ್ಯಾದ ಮನೋವಿಜ್ಞಾನ ಕಲಿಯುತ್ತಿರುವ ಫಿಲಿಫ್ ಬುಡೆಕಿನ್ ಎಂಬ 21 ವರ್ಷದ ವಿದ್ಯಾರ್ಥಿ ಕಂಡುಹಿಡಿದ ಈ ಮಾರಣಾಂತಿಕ ಆಟವು ಪ್ರಪಂಚದೆಲ್ಲೆಡೆ ಇದೀಗ ಸುಮಾರು 130ಕ್ಕೂ ಅಧಿಕ ಹದಿಹರೆಯದ ಮಕ್ಕಳ ಬಲಿ ತೆಗೆದುಕೊಂಡಿದೆ. ಈ ಆಟಕ್ಕೆ ಆತ್ಮಹತ್ಯೆಯ ಮೂಲಕ ತಮ್ಮ ಜೀವ ಕಳೆದುಕೊಂಡವರಲ್ಲಿ ಹೆಚ್ಚಿನವರು 12 ರಿಂದ 18 ವರ್ಷದ ಹದಿಹರೆಯದ ಮಕ್ಕಳೆನ್ನುವುದು ಮತ್ತೊಂದು ಅಚ್ಚರಿಯ ಸಂಗತಿ. ಬ್ಲೂ ವೇಲ್ ಎಂಬ ಈ ಇಂಟರ್ನೆಟ್ ಗೇಮ್ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸುವ ಆತಂಕಕಾರಿ ವಿಷಯವನ್ನು ಪತ್ತೆ ಹಚ್ಚಿದ ರಷ್ಯಾ ಪೋಲಿಸರು ಇದರ ಜನಕನಾದ ಫಿಲಿಪ್ ಬುಡೆಕಿನ್'ನನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಿಸಿದಾಗ ಆತ ಹೇಳಿದ ಮಾತುಗಳು "ಮಾನವನಾಗಿ ಸಮಾಜಕ್ಕೆ ಯಾವುದೇ ಉಪಕಾರವಿಲ್ಲದವರು ಬದುಕುವುದಕ್ಕಿಂತ ಸಾಯುವುದೇ ಲೇಸು. ಸಮಾಜವನ್ನು ಶುದ್ಧೀಕರಿಸುವುದಕ್ಕಾಗಿ ನಾನು ಈ ಇಂಟರ್ನೆಟ್ ಗೇಮ್ ಕಂಡುಹಿಡಿದೆ" ಎಂದಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿರುವ ತಂಡವೊಂದು ಹದಿಹರೆಯದವರನ್ನು ಆತ್ಮಹತ್ಯೆಯಂಥ ಕೃತ್ಯಕ್ಕೆ ಪ್ರಚೋದನೆ ನೀಡುವ ಆಟವೇ ‘ಬ್ಲೂ ವೇಲ್ ಸೂಸೈಡ್ ಚಾಲೆಂಜ್’. ಆಟದಲ್ಲಿ ಗೆಲ್ಲುವ ಸಲುವಾಗಿ ಪ್ರಾಣವನ್ನೇ ಲೆಕ್ಕಿಸದೆ ಸವಾಲುಗಳನ್ನು ಎದುರಿಸಲು ಯುವ ಸಮುದಾಯ ಮುಂದಾಗುತ್ತಿದೆ. 50 ದಿನಗಳ ಕಾಲ ಅಡ್ಮಿನ್ ಅಣತಿಯಂತೆ ನಡೆಯುವ ಈ ಬ್ಲೂ ವೇವ್ ಗೇಮ್'ಗೆ ಒಮ್ಮೆ ನಿಮ್ಮ ಮಕ್ಕಳು ಸೇರಿದರೆ ಸಾಕು ಸಾವು ಖಚಿತ.ಈ ಆಟಕ್ಕೆ ಸೇರಿಕೊಂಡ ದಿನದಿಂದ ಮಕ್ಕಳು ಮನೋವ್ಯಥೆಗೆ ಒಳಗಾಗುತ್ತಾರೆ. ಒಂದು ವೇಳೆ ಅರ್ಧದಲ್ಲಿ ನಿಮ್ಮ ಮಕ್ಕಳು ಆಟದಿಂದ ಹೊರಬರಬೇಕೆಂದು ನಿರ್ಧರಿಸಿದರೆ ಅಡ್ಮಿನ್'ಗಳು ನಿಮ್ಮ ಮಕ್ಕಳನ್ನು ಹೆದರಿಸಿ ಅವರು ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ಬಿಡುವುದಿಲ್ಲ. ಒಂದು ವೇಳೆ ಆಟವನ್ನು ಪೂರ್ತಿಯಾಗಿ ಆಡಿದರೆ 50ನೇ ದಿನ ನಿಮ್ಮ ಮಕ್ಕಳು ಸ್ವಯಂ ಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಆಟದಲ್ಲಿ ಪ್ರತಿಯೊಂದು ದಿನವು ಒಂದೊಂದು ಕಠಿನ ಸವಾಲನ್ನು ಆಟಗಾರರಿಗೆ ನೀಡಲಾಗುತ್ತದೆ. ಅಲಾರಂ ಇಡುವ ಮೂಲಕ ಮದ್ಯರಾತ್ರಿ ನಿದ್ದೆಯಿಂದ ಎದ್ದೇಳುವಂತೆ ಪ್ರೇರೇಪಿಸುವುದು, ಎತ್ತರದ ಮಹಡಿಯ ತುತ್ತ ತುದಿಗೆ ಹತ್ತುವುದು, ತನ್ನ ಚರ್ಮಕ್ಕೆ ತಾನೇ ಸೂಜಿಯಿಂದ ಚುಚ್ಚಿಕೊಳ್ಳುವುದು, ಭಯಾನಕ ಪರ್ವತಗಳನ್ನು ಹತ್ತುವುದು ,ರಾತ್ರಿ ಮಲಗುವ ಹೊತ್ತಿನಲ್ಲಿ ಅಡ್ಮಿನ್ ಕಳುಹಿಸಿದ ಭಯಾನಕ ಚಲನಚಿತ್ರಗಳನ್ನು ವೀಕ್ಷಿಸುವುದು ಹಾಗೂ ತನ್ನದೇ ತೋಳನ್ನು ಹರಿತವಾದ ಚಾಕುವಿನಿಂದ ಇರಿದುಕೊಳ್ಳುವುದು ಮುಂತಾದವು ಇದರಲ್ಲಿ ಪ್ರಮುಖವಾದವುಗಳು.
ಅರ್ಜೆಂಟೈನಾ,ಬಲ್ಗೇರಿಯಾ,ಬ್ರೆಝಿಲ್,ಚಿಲಿ,ಚೀನಾ,ಕೊಲಂಬಿಯಾ,ಜಾರ್ಜಿಯಾ,ಇಟಲಿ,ಕಿನ್ಯಾ ,ಪರಗ್ವೆ,ಪೋರ್ಚುಗಲ್,ರಷ್ಯಾ,ಸೆರ್ಬಿಯಾ,ಸ್ಪೇನ್,ಉರಗ್ವೆ,ಅಮೇರಿಕಾ ಹಾಗೂ ವೆನಿಝ್ವೇಲಾ ಮುಂತಾದ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಬ್ಲೂ ವೇವ್ ಸೂಸೈಡ್ ಗೇಮ್ ಹಲವು ಹದಿಹರೆಯದ ವಿದ್ಯಾರ್ಥಿಗಳ ಜೀವವನ್ನು ಬಲಿ ತೆಗೆದುಕೊಂಡರೂ ಭಾರತವು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ 2017ನೇ ಜುಲೈ 30ರಂದು ಮುಂಬೈಯ ಅಂಧೇರಿಯಲ್ಲಿ 14 ವರ್ಷದ ಹುಡುಗನೊಬ್ಬ ಏಳನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾಗ ತನಿಖೆ ನಡೆಸಿದ ಪೋಲಿಸರಿಗೆ ದೊರೆತದ್ದು ಮಾತ್ರ ಭಯಾನಕ ಮಾಹಿತಿ. ತನ್ನ ಹೆತ್ತವರಿಗೆ ತಿಳಿಯದಂತೆ ತನ್ನ ಲ್ಯಾಪ್'ಟಾಪ್ ಮೂಲಕ ಬ್ಲೂ ವೇಲ್ ಗೇಮ್ ಆಡುತ್ತಿದ್ದ ಈ ಬಾಲಕನು ಆಟದ ಕೊನೆಯ ದಿನ ಅಂದರೆ 50ನೇ ದಿನ ಮನೋವ್ಯಥೆಗೆ ಒಳಗಾಗಿ ಗಗನ ಚುಂಬಿ ಕಟ್ಟಡದ ಏಳನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿದ್ದಾನೆ ಎಂದಾಗಿತ್ತು ಪೋಲಿಸರಿಗೆ ದೊರೆತ ಮಾಹಿತಿ. ಅಂದಿನಿಂದ ಭಾರತೀಯ ಪೋಷಕರೂ ಕೂಡ ಈ ಸೂಸೈಡ್ ಗೇಮ್ ಕುರಿತು ಚಿಂತಿತರಾಗಿದ್ದಾರೆ.
ಆದುದರಿಂದ ಪೋಷಕರೇ ತಮ್ಮ ಮಕ್ಕಳು ತಮ್ಮಷ್ಟಕ್ಕೇ ಅಥವಾ ನಿಮಗೆ ಕದ್ದು ಮುಚ್ಚಿ ಆಡುವ ಆಟದ ಬಗ್ಗೆ ನಿಗಾವಹಿಸಿರಿ. ಮಕ್ಕಳ ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಮೊಬೈಲ್'ಗಳನ್ನು ಆಗಾಗ ತಪಾಸಣೆ ಮಾಡುವ ಮೂಲಕ ತಮ್ಮ ಮಕ್ಕಳ ಭವಿಷ್ಯವನ್ನು ಕಾಪಾಡಿ. ಆನ್'ಲೈನ್ ನಲ್ಲಿ ಉಚಿತವಾಗಿ ಸಿಗುವ ಇಂಥಹ ಸುಸೈಡ್ ಗೇಮ್'ಗಳನ್ನು ನಿಮ್ಮ ಮಕ್ಕಳು ಅದರ ಭಯಾನಕತೆಯ ಅರಿವಿಲ್ಲದೆ ಡೌನ್'ಲೋಡ್ ಮಾಡಿಕೊಳ್ಳುವುದನ್ನು ತಾವು ಎಚ್ಚರವಾಗಿದ್ದರೆ ತಡೆಯಲೂಬಹುದು.
ಈ ಬ್ಲೂ ವೇಲ್ ಸೂಸೈಡ್ ಗೇಮ್'ನ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕಂಗೆಟ್ಟ ಪಾಶ್ಚಾತ್ಯ ರಾಷ್ಟ್ರಗಳು ಈ ಆಟವನ್ನು ನಿಷೇಧಿಸುವ ಕುರಿತು ಆಲೋಚಿಸುತ್ತಿದೆ. ಈ ಆಟದೀಂದ ನಮ್ಮ ದೇಶದ ಮಕ್ಕಳು ಆತ್ಮಹತ್ಯೆಯಂತಹ ಹೀನಕೃತ್ಯಗಳಿಂದ ಪ್ರಾಣವನ್ನು ಕಳೆದುಕೊಳ್ಳುವ ಮುಂಚಿತವಾಗಿ ಪೋಷಕರು ಈ ಆಟವನ್ನು ನಿಷೇಧಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಾದ ಅಗತ್ಯವಿದೆ. ಬ್ಲೂ ವೇಲ್ ಎಂಬ ಪೀಡೆಯು ನಮ್ಮ ಮಕ್ಕಳ ಭವಿಷ್ಯವನ್ನು ಹಾಳುಗೆಡುವ ಮೊದಲೇ ಈ ಆಟವನ್ನು ನಿಷೇಧಿಸುವ ಮೂಲಕ ಸರಕಾರವು ಹದಿಹರೆಯದ ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ರಕ್ಷಿಸಬೇಕಾದ ಅವಶ್ಯಕತೆಯಿದೆ.
-ಎಸ್.ಎ. ರಹಿಮಾನ್ ಮಿತ್ತೂರು
Comments
Post a Comment