ಬಿಜೆಪಿ ಮಾತ್ರವಲ್ಲ ಯಾವುದೇ ರಾಜಕೀಯ ಪಕ್ಷದವರೂ ತಮ್ಮ ರಾಜಕೀಯ ಲಾಭಕ್ಕಾಗಿ ನಡೆಸುವ ಸಮಾವೇಶದಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸುವುದು ಸರಿಯಾದ ಕ್ರಮವಲ್ಲ.
ಬಿಜೆಪಿ ನಡೆಸಿದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಸ್ಲಿಂ ಪಂಡಿತರು ಭಾಗವಹಿಸಿದ್ದು ತೀವ್ರ ಚರ್ಚೆಗೆ ಒಳಗಾಗಿದೆ.ಬಿಜೆಪಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಉಸ್ತಾದರು ಭಾಗವಹಿಸಿದ್ದಾ ಎಂದು ಕೆಲವರು ಹುಬ್ಬೇರಿಸುತ್ತಿರುವುದೂ ಕಂಡು ಬಂತು.
ನನ್ನ ಮಟ್ಟಿಗೆ ಹೇಳುವುದಾದರೆ
ಬಿಜೆಪಿ ಮಾತ್ರವಲ್ಲ ಯಾವುದೇ ರಾಜಕೀಯ ಪಕ್ಷದವರೂ ತಮ್ಮ ರಾಜಕೀಯ ಲಾಭಕ್ಕಾಗಿ ನಡೆಸುವ ಸಮಾವೇಶದಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸುವುದು ಸರಿಯಾದ ಕ್ರಮವಲ್ಲ.
ಧರ್ಮಗುರುಗಳು ಸಾರ್ವಜನಿಕವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಮುಸ್ಲಿಂ ಸಮಾಜದಲ್ಲಿ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡವರಿರಬಹುದು. ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದು ಸರ್ವರ ಒಳಿತಿಗಾಗಿ ದುಡಿಯುವುದು ಧರ್ಮಗುರುಗಳ ಧರ್ಮ. ಅಲ್ಲಿ ಪಾಕ್ಷಿಕ ಗುರುತುಗಳು ಧರ್ಮನಿರ್ವಹಣೆಗೆ ತಡೆಗೋಡೆಯಾಗಬಾರದು. ನಿರ್ದಿಷ್ಟ ಪಕ್ಷವೊಂದು ರಾಜಕೀಯ ಲಾಭಕ್ಕಾಗಿ ನಡೆಸುವ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹಾಗೂ ಸಾಮೂಹಿಕವಾಗಿ ಭಾಗವಹಿಸಿ ನಿರ್ದಿಷ್ಟ ಪಕ್ಷದವೊಂದರ ಸಾಮಿಪ್ಯ ಪ್ರದರ್ಶಿಸುವುದು ಧರ್ಮಗುರುಗಳ ಘನತೆಗೂ ಒಡನಾಟಕ್ಕೂ ಶೋಭೆಯಲ್ಲ.
ನಾನಿಲ್ಲಿ ಹೇಳುತ್ತಿರುವುದು ಬಿಜೆಪಿ ನಡೆಸಿದ ಕಾರ್ಯಕ್ರಮ ಎಂಬ ದೃಷ್ಟಿಯಲ್ಲಿ ಅಲ್ಲ.ಯಾವುದೇ ನಿರ್ದಿಷ್ಟ ಪಕ್ಷ ನಡೆಸಿದರೂ ತಥೈವ. ಆದ್ದರಿಂದ ಕಾಂಗ್ರೆಸ್ ನಡೆಸಿದರೂ ಜೆಡಿಎಸ್ ನಡೆಸಿದರೂ ಅದರಲ್ಲಿ ಭಾಗವಹಿಸಿ ಪಾಕ್ಷಿಕ ಸಂಕುಚಿತತೆಯನ್ನು ಪ್ರದರ್ಶಿಸುವುದು ಧರ್ಮಗುರುಗಳಿಗೆ ತರವಲ್ಲ.
ಅದೇ ವೇಳೆ ಕೇಂದ್ರ ಸರಕಾರ ಮುಸ್ಲಿಮರಿಗಾಗಿ ಮೀಸಲಿಟ್ಟ ಸವಲತ್ತುಗಳನ್ನು ಧರ್ಮಗುರುಗಳ ಗಮನಕ್ಕೆ ತಂದು ಅವರ ಮೂಲಕ ಮೊಹಲ್ಲಾ ನಿವಾಸಿಗಳಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ್ಮ ಹಮ್ಮಿಕೊಂಡಿದ್ದರೆ ಹಾಗೂ ಅದೇ ಉದ್ದೇಶದಲ್ಲಿ ಧರ್ಮಗುರುಗಳು ಭಾಗವಹಿಸಿದ್ದರೆ ಅದನ್ನು ತಪ್ಪೆಂದು ಹೇಳಲಿಕ್ಕಾಗದು. ಏಕೆಂದರೆ ಸರಕಾರ ನಮ್ಮ ಸಮಾಜಕ್ಕೆ ನೀಡುವ ಹಲವಾರು ಸವಲತ್ತುಗಳ ಬಗ್ಗೆ ಮುಸ್ಲಿಮರು ಅಜ್ಞರಾಗಿದ್ದಾರೆ. ಅದನ್ನು ಮುಸ್ಲಿಂ ಜನಸಾಮಾನ್ಯರಿಗೆ ಗರಿಷ್ಟ ಪ್ರಮಾಣದಲ್ಲಿ ತಲುಪಿಸುವ ಜವಾಬ್ದಾರಿ ಧರ್ಮಗುರುಗಳ ಸಹಿತ ಎಲ್ಲರ ಮೇಲೂ ಇದೆ. ಆದರೆ ಅಲ್ಲಿ ನಡೆದ ಭಾಷಣದ ವೀಡಿಯೊವನ್ನು ನೋಡಿದಾಗ ಅಂತಹಾ ಯಾವುದೇ ಮಾಹಿತಿ ಕಾಣಲಿಲ್ಲ ಎಂಬುದು ಬೇರೆ ಮಾತು.
ಇನ್ನು ಹೇಗಾದರೂ ಅಲ್ಲಿ ಭಾಗವಹಿಸಿಯಾಯಿತು ಎಂದಿಟ್ಟುಕೊಳ್ಳೋಣ, ಅಲ್ಲಿ ರಾಜಕೀಯ ಮಾತಾಡುವುದಕ್ಕೆ ಬದಲಾಗಿ ಮುಸ್ಲಿಂ ಮತ್ತು ಹಿಂದುಗಳ ಮಧ್ಯೆ ಇರುವ ಮತೀಯ ಕಂದಕವನ್ನು ಮುಚ್ಚಲು ಹಾಗೂ ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡ ಕೆಲವು ಸಮಾಜ ಘಾತುಕರ ಪುಂಡಾಟಿಕೆಯನ್ನು ಬಿಜೆಪಿಗರ ಗಮನಕ್ಕೆ ತಂದು ಅವರನ್ನು ನೆಟ್ಟಗೆ ನಿಲ್ಲಿಸುವಂತೆ ಹೇಳಿಕೆ ಕೊಟ್ಟಿದ್ದರೆ ಅದಕ್ಕೊಂದು ಅರ್ಥವಿತ್ತು. ಮುತಾಲಿಕ್,ಶೇಣವ , ಪ್ರಭಾಕರ ಭಟ್ ಮುಂತಾದ ಉರಿನಾಲಗೆಗಾರರನ್ನು ಪಕ್ಷವು ಹದ್ದುಬಸ್ತಿನಲ್ಲಿಡುವಂತೆ ಬಿಜೆಪಿ ನಾಯಕರಲ್ಲಿ ಕೋರಬೇಕಾಗಿತ್ತು. ಪ್ರತೀಯೊಬ್ಬ ಹಿಂದು ತನ್ನೊಂದಿಗೆ ತಲವಾರೊಂದನ್ನು ಇಟ್ಟುಕೊಳ್ಳಬೇಕೆಂದು ಯಾವುದೇ ಅಂಜಿಕೆ, ಸಂಕೋಚವಿಲ್ಲದೆ ಬಹಿರಂಗವಾಗಿ ಭಾಷಣಮಾಡುವ ,ಜುನೈದನಂತಹಾ ಅಮಾಯಕ ಹಾಗೂ ಮುಗ್ಧ ರನ್ನೂ ಹತ್ಯೆ ಮಾಡುವ, ಗೋರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧ ಸಂಘಿಗಳನ್ನು ಸರಿದಾರಿಗೆ ತರಲು ಆಹ್ವಾನ ನೀಡಬೇಕಾಗಿತ್ತು. ಅಶ್ರಫ್ ನನ್ನು ಹತ್ಯೆ ಮಾಡಿದಾಗ ಅದನ್ನು ತಾನೊಬ್ಬ ಜನಪ್ರತಿನಿಧಿ ಎಂಬ ದೃಷ್ಟಿಯಲ್ಲಿ ಖಂಡಿಸದೆ,ಪ್ರತಿಭಟಿಸದೆ ಶರತ್ ನನ್ನು ಹತ್ಯೆ ಮಾಡಿದಾಗ ನಡುರಸ್ತೆಯಲ್ಲಿ ಕಾನೂನು ಉಲ್ಲಂಘಿಸಿ ಪ್ರತಿಭಟನೆಗಿಳಿದ ನಳಿನ್ ಕುಮಾರರಂತಹಾ ಜನಪ್ರತಿನಿಧಿಗಳ ದ್ವಿಮುಖ ನೀತಿಯನ್ನು ಖಂಡಿಸಬೇಕಾಗಿತ್ತು.ಹಾಗಾಗಿದ್ದಲ್ಲಿ ಇವರು ಭಾಗವಹಿಸಿದ್ದು ಸಾರ್ಥಕವೆನಿಸುತ್ತಿತ್ತು. ಇದ್ಯಾವುದನ್ನೂ ಮಾಡದೆ ಕೇವಲ ರಾಜಕೀಯ ಮಾತಾಡಲೂ,ರಾಜಕಾರಣಿಗಳ ಗೊಡ್ಡು ಭಾಷಣವನ್ನು ಆಲಿಸಲೂ ಹೋಗುವುದು ಧರ್ಮಗುರುಗಳ ದೊಡ್ಡ ಘಣತೆಗೆ ಒಮ್ಮೆಯೂ ತಕ್ಕುದಲ್ಲ. ಧರ್ಮಗುರುಗಳು ತಮ್ಮ ಘಣತೆಯನ್ನು ರಾಜಕೀಯ ಪುಡಾರಿಗಳ ಮುಂದೆ ಪಣಕ್ಕಿಡುವ ಮಟ್ಟಕ್ಕೆ ಒಮ್ಮೆಯೂ ಇಳಿಯಬಾರದು.
ಅದರೊಂದಿಗೆ ಒಂದು ಮಾತನ್ನು ಇಲ್ಲಿ ಸೇರಿಸುತ್ತಿದ್ದೇನೆ, ಮುಸ್ಲಿಮರು ಯಾವುದಾದರೊಂದು ನಿರ್ದಿಷ್ಟ ಪಕ್ಷದ ದಾಸರಲ್ಲ. ಪಕ್ಷ ರಾಜಕೀಯದ ಯಾವುದೇ ಅಗತ್ಯ ಮುಸ್ಲಿಮರಿಗಿಲ್ಲ. ಅಂತಹಾ ಕೀಳು ಮಟ್ಟದ ರಾಜಕೀಯದ ಕಾಲ ಇನ್ನು ಮುಂದೆ ದೊರಕಲಾರದು.
ಬಿಜೆಪಿ ನಾಯಕರೊಂದಿಗೆ ನಮಗೆ ಹೇಳಲಿಕ್ಕಿರುವುದು ಇಷ್ಟೆ, ಬಿಜೆಪಿ ಸರಕಾರ ಕೆಲವೊಂದು ಉತ್ತಮ ಸವಲತ್ತುಗಳನ್ನು ಮುಸ್ಲಿಮರಿಗೆ ನೀಡಿದೆ, ನಾವು ಅದನ್ನು ಇಲ್ಲ ಎನ್ನುವುದಿಲ್ಲ. ಅದಕ್ಕೆ ನಾವು ಕೃತಜ್ಞತೆಯನ್ನೂ ಸಲ್ಲಿಸುತ್ತೇವೆ. ಆದರೆ ನಮಗೆ ಆ ಸವಲತ್ತು ಈ ಸವಲತ್ತು ಗಳಿಗಿಂತ ಹೆಚ್ಚು ಮುಖ್ಯವಾದುದು ನಮ್ಮ ಅಸ್ತಿತ್ವ. ಮುಸ್ಲಿಮರ ಅಸ್ತಿತ್ವವನ್ನೇ ನಿರ್ಣಾಮ ಮಾಡಿ ಹಿಂದೂ ರಾಷ್ಟ್ರದ ಸಂಕಲ್ಪ ಹೊಂದಿದ ಕೆಲವು ಮತಾಂಧರು ನಿಮ್ಮ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ತಾವು ಅಂತಹಾ ಕೆಟ್ಟ ನಿರ್ಧಾರಗಳಿಗೆ ಪೂರಕವಾಗಿದ್ದರೆ ಮೊದಲು ಅದನ್ನು ಸರಿಪಡಿಸಿ. ತಾವು ನಮಗೆ ಶಾದೀ ಭಾಗ್ಯ, ಕಂಕಣ ಭಾಗ್ಯ, ಸೈಕಲ್ ಭಾಗ್ಯ ನೀಡುವುದಕ್ಕಿಂತ ಮೊದಲು ನಮಗೆ ಜೀವನ ಭಾಗ್ಯವನ್ನು ದಯಪಾಲಿಸಿ. ತಾವು ಯಾವುದೇ ಭಾಗ್ಯವನ್ನು ನೀಡದಿದ್ದರೂ ನಾವು ಕಷ್ಟಪಟ್ಟು ದುಡಿದು ನಮ್ಮಷ್ಟಕ್ಕೆ ಜೀವಿಸುವೆವು. ತಾವು ಅದಕ್ಕಾದರೂ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ. ಆ ಉಪಕಾರವನ್ನು ನಾವು ಯಾವತ್ತೂ ಮರೆಯಲಾರೆವು.
✍
ತೋಕೆ ಸಖಾಫಿ
Comments
Post a Comment