ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸುನ್ನೀ ಜಂಯ್ಯತುಲ್ ಉಲಮಾ ಸಂಘಟಿಸಿದ ತಲಾಖ್ ವಿವರಣಾ ಸಮಾವೇಶ ಹಾಗು ಸ್ನೇಹ ಸಂವಾದ ಸಭೆ ಮಂಗಳೂರಿನ ಹೋಟೆಲ್ ಸೂರ್ಯ ಸಭಾಂಗಣದಲ್ಲಿ ದ.ಕ ಜಿಲ್ಲಾ ಜಂಯ್ಯತುಲ್ ಉಲಮಾ ಅಧ್ಯಕ್ಷರಾದ ಮುಹಮ್ಮದಲಿ ಫೈಝಿ ಬಾಳೆಪುಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಹಮ್ಮದ್ ಸಅದಿ ವಳವೂರು ಉಸ್ತಾದರು ಸಭೆಯನ್ನು ಉದ್ಘಾಟಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಎಸ್ ಪಿ ಹಂಝ ಸಖಾಫಿಯವರು ಇಸ್ಲಾಮಿನ ನಿಯಮಾವಳಿಗಳು ಅಲ್ಲಾಹನ ಸಂವಿಧಾನಗಳಾಗಿದ್ದು ಅವುಗಳ ಪಾಲನೆ ಮುಸಲ್ಮಾನನ ಮೇಲೆ ಕಡ್ಡಾಯವಾಗಿದೆ ಎಂದರು.
ವಿಷಯ ಮಂಡನೆ ಮಾಡುತ್ತಾ ಮಾತನಾಡಿದ ದಕ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮುಹಿಯದ್ದೀನ್ ತೋಕೆ ಸಖಾಫಿ ಮುಲ್ಲಾಗಳಿಗೆ ಮೌಲಾನಗಳಿಗೆ ಇಸ್ಲಾಮಿನ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ಅವಕಾಶವಿದೆ ಎಂದಾಗಿ ಕೆಲವರು ತಪ್ಪಾಗಿ ಅರ್ಥೈಸಿಕೊಂಡ ಕಾರಣ ತ್ರಿವಳಿ ತಲಾಕ್ ನ ವಿಷಯದಲ್ಲಿ ಮೌಲಾನಗಳು ಮಧ್ಯೆ ಪ್ರವೇಶಿಸಿ ತಿದ್ದುಪಡಿ ತರಬೇಕೆಂಬ ಭಾವನೆ ಶುದ್ದ ಅಸಂಬದ್ಧವಾಗಿದೆ ಎಂದು ಅವರು ಹೇಳಿದರು.
ತ್ರಿವಳಿ ತಲಾಖ್ ಹೇಳಿಯೂ ಮೂರು ತಲಾಕ್ ಸಂಭವಿಸುವುದಿಲ್ಲ ಎಂದು ವಾದ ಮಂಡಿಸುವವರು ಮುಂಗೋಪಿಯಾದ ವ್ಯಕ್ತಿ ಟಿವಿ ಎಸೆದು ಪುಡಿ ಪುಡಿ ಮಾಡಿದರೂ ಟಿವಿ ಪುಡಿಯಾಗಿಲ್ಲ ಎಂದು ಹೇಳುವವನಿಗೆ ಸಮವೆಂದು ತೋಕೆ ಉಸ್ತಾದ್ ಬಣ್ಣಿಸಿದರು.
ತ್ರಿವಳಿ ತಲಾಕ್ ಇಸ್ಲಾಮಿನಲ್ಲಿ ಇಲ್ಲ ಎಂದು ವಾದಿಸುವ ನೂತನವಾದಿಗಳ ವಿತಂಡವಾದಗಳಿಗೆ ಕುರ್ಆನ್ ಹದೀಸ್ ಮತ್ತು ಸಹಾಬಿಗಳ ಅನೇಕಾರು ಚರಿತ್ರೆಗಳನ್ನು ಪುರಾವೆಯಾಗಿಟ್ಟು ಖಂಡಿಸಿದರು.
*ಸುನ್ನೀ ಸಾಹಿತ್ಯ ಮಂಡಳಿ(ಸುಸಾಮ)* ಇದರ ಸಂಪೂರ್ಣ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸುಸಾಮ ಲಾಂಛನವನ್ನು ಓಲೆಮುಂಡೋವ್ ಮಹ್ಮೂದುಲ್ ಫೈಝಿ ಉಸ್ತಾದರು ಬಿಡುಗಡೆ ಗೊಳಿಸಿದರು.
ಕೊನೆಯಲ್ಲಿ ಸ್ನೇಹ ಸಂವಾದ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
Comments
Post a Comment