Skip to main content

ಆಭರಣ ದ ಝಕಾತ್

ಆಭರಣ ದ ಝಕಾತ್
ತೋಕೆ ಉಸ್ತಾದರ ಸುನ್ನೀ ವಾಣಿಯಿಂದ ಅಲ್ಪ ಭಾಗವಿದು
ಲೇಖಕ: ತೋಕೆ ಉಸ್ತಾದ್

ಚಿನ್ನ ಮತ್ತು ಬೆಳ್ಳಿ ಗಳಿಂದ ಉಂಟು ಮಾಡಿದ ಆಭರಣ ಗಳಲ್ಲಿ ಝಕಾತ್ ಇದೆಯೇ ಎಂಬುವುದರಲ್ಲಿ ಪೂರ್ವಿಕರೆಡೆಯಲ್ಲಿ ಭಿನ್ನಮತವಿದೆ. ಸ್ವಹಾಬಿಗಳ ಪೈಕಿ ಅಬ್ದುಲ್ಲಾ ಹಿಬ್ನು ಉಮರ್ ರಳಿಯಲ್ಲಾಹು ಅನ್ಹುಮ್, ಜಾಬಿರ್ ಬಿನ್ ಅಬ್ದುಲಾ ರಳಿಯಲ್ಲಾಹು ಅನ್ಹುಮ್, ಆಯಿಶಾ ರಳಿಯಲ್ಲಾಹು ಅನ್ಹಾ ತಾಬಿಉಗಳ ಪೈಕಿ ಹಸನುಲ್ ಬಸ್ವರೀ ರಳಿಯಲ್ಲಾಹು ಅನ್ಹು, ಇಬ್ ನುಲ್ ಮುಸಯ್ಯಬ್ ರಳಿಯಲ್ಲಾಹು ಅನ್ಹು, ಶಅಬೀ ರಳಿಯಲ್ಲಾಹು ಅನ್ಹು, ಇಮಾಮರುಗಳ ಪೈಕಿ ಇಮಾಮ್ ಮಾಲಿಕ್ ರಳಿಯಲ್ಲಾಹು ಅನ್ಹು, ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು, ಇಮಾಮ್ ಅಹ್ಮದ್ ಬಿನ್ ಹಂಬಲ್ ರಳಿಯಲ್ಲಾಹು ಅನ್ಹು, ಇಮಾಮ್ ಇಸ್ಹಾಖ್ ಇಬ್ನು ರಾಹವೈಹಿ ರಳಿಯಲ್ಲಾಹು ಅನ್ಹು, ಮುಂತಾದವರು ಆಭರಣಗಳಲ್ಲಿ ಝಕಾತ್ ಇಲ್ಲ ಎಂಬ ನಿಲುವನ್ನು ತಾಳಿದ್ದಾರೆ.
ಅದೇ ವೇಳೆ ಉಮರ್ ರಳಿಯಲ್ಲಾಹು ಅನ್ಹು, ಅಮ್ರ್ ಬಿನ್ ಅಸ್ವ್ ರಳಿಯಲ್ಲಾಹು ಅನ್ಹು, ಇಬ್ನು ಮಸ್ ಊದ್ ರಳಿಯಲ್ಲಾಹು ಅನ್ಹು, ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್ಹು ಹಾಗೂ ಇಮಾಮರುಗಳ ಪೈಕಿ ಇಮಾಮ್ ಝುಹ್ರಿ ರಳಿಯಲ್ಲಾಹು ಅನ್ಹು, ಇಮಾಮ್ ಸೌರೀ ರಳಿಯಲ್ಲಾಹು ಅನ್ಹು ಮುಂತಾದವರು ಝಕಾತ್ ಕಡ್ಡಾಯ ಎಂದು ತಿಳಿಸಿದ್ದಾರೆ.
ಆಭರಣ ಗಳಲ್ಲಿ ಝಕಾತ್ ಕಡ್ಡಾಯ ವಿಲ್ಲ ವೆಂದು ಹೇಳಿದ ವರ ಪುರಾವೆ ಗಳು ಈ ಕೆಳಗಿನವುಗಳಾಗಿವೆ.

ಇಬ್ನು ಉಮರ್ ರಳಿಯಲ್ಲಾಹು ಅನ್ಹು ರವರಿಂದ ವರದಿ; ಪ್ರವಾದಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ

*"ಆಭರಣ ಗಳಲ್ಲಿ ಝಕಾತ್ ಇಲ್ಲ"* (ಅಬ್ದುರ್ರಝ್ಝಾಖ್)

*ಸ್ವಹಾಬಿವರ್ಯರಾದ ಅಬ್ದುಲ್ಲಾಹಿಬ್ ನು ಉಮರ್ ರಳಿಯಲ್ಲಾಹು ಅನ್ಹುಮ್ ರವರು ತನ್ನ ಹೆಣ್ಣು ಮಕ್ಕಳಿಗೆ ಹಾಗೂ ಗುಲಾಮ ಸ್ತ್ರೀ ಯರಿಗೆ ಚಿನ್ನದ ಆಭರಣಗಳನ್ನು ನೀಡುತ್ತಿದ್ದರು. ಅವುಗಳಿಗೆ ಝಕಾತ್ ನೀಡುತ್ತಿರಲಿಲ್ಲ."* (ಅಲ್ ಅಮ್ ವಾಲ್ ಲಿಬ್ನಿ ಝನ್ಜವೈಹಿ, ಹ.ನಂ: 1781) (ಸುನನುಲ್ ಕುಬ್ರಾ ಹ.ನಂ: 785)

*ಇಬ್ನು ಅಬಿ ಮುಲೈಕಾ ರಳಿಯಲ್ಲಾಹು ಅನ್ಹು ಹೇಳುತ್ತಾರೆ: "ಆಯಿಶಾ ರಳಿಯಲ್ಲಾಹು ಅನ್ಹಾ ರವರು ತನ್ನ ಸಹೋದರ ಪುತ್ರಿ ಯ ಕೈ, ಕಾಲು ಹಾಗೂ ಕೊರಳಿಗೆ ಚಿನ್ನದ ಆಭರಣಗಳನ್ನು ಹಾಕುತ್ತಿದ್ದರು. ಅವುಗಳಲ್ಲಿ ಅವರು ಝಕಾತ್ ನೀಡುತ್ತಿರಲಿಲ್ಲ."*
(ಹ ನಂ: 1784)

*ಅಲಿಯ್ಯ್ ಬಿನ್ ಸುಲೈಮ್ ರಳಿಯಲ್ಲಾಹು ಅನ್ಹುಮ್ ರವರು ಸ್ವಹಾಬಿವರ್ಯಾರಾದ ಅನಸ್ ರಳಿಯಲ್ಲಾಹು ಅನ್ಹು ರವರೊಂದಿಗೆ ಕೇಳಿದರು, "ಆಭರಣ ಗಳಲ್ಲಿ ಝಕಾತ್ ಇದೆಯೇ.?" ಆಗ ಅವರು ಹೇಳಿದರು "ಇಲ್ಲ"*
(ಹ.ನಂ: 1787)

ಹೀಗೆ ಆಭರಣ ಗಳಲ್ಲಿ ಝಕಾತ್ ಇಲ್ಲವೆಂದು ತಿಳಿಸುವ ಧಾರಾಳ ಹದೀಸ್ ಗಳನ್ನು ಕಾಣಬಹುದು.

*ನೂತನವಾದಿಗಳ ನಾಯಕ ಇಬ್ನು ತೈಮಿಯ್ಯಾರೇ* ಹೇಳುವುದನ್ನು ನೋಡಿ:

" ಸ್ತ್ರೀ ಗಳ ಆಭರಣ ವಾಗಿದ್ದರೆ ಇಮಾಮ್ ಮಾಲಿಕ್ ರಳಿಯಲ್ಲಾಹು ಅನ್ಹು, ಲೈಸ್ ರಳಿಯಲ್ಲಾಹು ಅನ್ಹು, ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು, ಇಮಾಮ್ ಅಹ್ಮದ್ ರಳಿಯಲ್ಲಾಹು ಅನ್ಹು ಹಾಗೂ ಅಬೂ ಉಬೈದ ರಳಿಯಲ್ಲಾಹು ಅನ್ಹು ರವರ ನಿಲುವು ಅವುಗಳಿಗೆ ಝಕಾತ್ ಇಲ್ಲವೆಂದಾಗಿದೆ.ಸ್ವಹಾಬಿಗಳಾದ ಆಯಿಶಾ ರಳಿಯಲ್ಲಾಹು ಅನ್ಹಾ, ಅಸ್ಮಾ ರಳಿಯಲ್ಲಾಹು ಅನ್ಹಾ ಇಬ್ನು ಉಮರ್ ರಳಿಯಲ್ಲಾಹು ಅನ್ಹು, ಅನಸ್ ರಳಿಯಲ್ಲಾಹು ಅನ್ಹು,ಜಾಬಿರ್ ರಳಿಯಲ್ಲಾಹು ಅನ್ಹು ಹಾಗೂ ತಾಬಿಉಗಳ ಒಂದು ಗುಂಪಿನಿಂದ ಲೂ ಅದು ವರದಿಯಾಗಿದೆ." (ಫತಾವಾ ಭಾಗ:13, ಪುಟ: 14)

ಈ ಮೇಲಿನ ವಿವರಣೆಯಿಂದ ಸ್ವಹಾಬಿಗಳು ಮತ್ತು ತಾಬಿಉಗಳು ಆಭರಣ ಗಳಿಗೆ ಝಕಾತ್ ಇಲ್ಲ ವೆಂಬ ನಿಲುವನ್ನು ತಾಳಿದ್ದರು ಎಂದು ಸ್ಪಷ್ಟವಾಗುತ್ತದೆ.ಮದ್ಸ್ ಹಬಿನ ಇಮಾಮರುಗಳ ಪೈಕಿ ಅಬೂ ಹನೀಫಾ ರಳಿಯಲ್ಲಾಹು ಅನ್ಹು ರವರು ಮಾತ್ರವಾಗಿದ್ದಾರೆ ಝಕಾತ್ ನೀಡಬೇಕೆಂದು ಹೇಳಿದ್ದು. ಉಳಿದ ಮೂರು ಇಮಾಮರುಗಳು ಝಕಾತ್ ಇಲ್ಲವೆಂದು ತಿಳಿಸಿದ್ದಾರೆ.

*ಎಷ್ಟರ ತನಕ ನೀಡಬೇಕಾಗಿಲ್ಲ...?*

ಆಭರಣ ಗಳಿಗೆ ಝಕಾತ್ ಇಲ್ಲವೆಂದು ಹೇಳುವಾಗ ಕೆಲವರು ಎಷ್ಟಿದ್ದರೂ ನೀಡಬೇಡವೇ..?ಐವತ್ತು ಪವನ್ ಇದ್ದರೂ ನೀಡ ಬೇಡವೇ..? ನೂರ್ ಪವನ್ ಇದ್ದರೂ ನೀಡ ಬೇಡವೇ..? ಎಂದು ಕೇಳುತ್ತಾರೆ. ಮತ್ತೆ ಕೆಲವರು ಎಂಬತ್ತು ಪವನ್ ಇದ್ದರೆ ನೀಡಬೇಕು, ನೂರ್ ಪವನ್ ಇದ್ದರೆ ನೀಡಬೇಕು ಎಂದೂ ಹೇಳುತ್ತಾರೆ. ಇಂತಹಾ ಗೊಂದಲ ವನ್ನು ಜನರೆಡೆಯಲ್ಲಿ ನಮಗೆ ಕಾಣಬಹುದು. ಆದುದರಿಂದ ಈ ಬಗ್ಗೆ ಶಾಫಿಈ ಮದ್ಸ್ ಹಬ್ ನಿಂದ ಸ್ಪಷ್ಟವಾದ ನಿಲುವು ಎಂಬುದನ್ನು ನೋಡೋಣ.

ಗಂಡಸರಿಗೆ ನಿಷಿದ್ಧ ವಾದ ಚಿನ್ನ ಬೆಳ್ಳಿ ಯ ಆಭರಣಗಳು ಮಹಿಳೆಯರಿಗೆ ಸಮ್ಮತಾರ್ಹವಾಗಲು ಕಾರಣ ಸೌಂದರ್ಯ ವಾಗಿದೆ. ಅಂದರೆ ಒಬ್ಬ ಮಹಿಳೆಯು ತನ್ನ ಗಂಡನ ಮುಂದೆ ಸೌಂದರ್ಯ ವತಿಯಾಗಿ ನಿಲ್ಲಬೇಕು. ಮಾತ್ರವಲ್ಲ ಪ್ರತಿ ಯೊಬ್ಬ ಮಹಿಳೆಯು ತಾನು ಗಂಡನಿಗೆ ಸೌಂದರ್ಯ ವುಳ್ಳವಳಾಗಿ ಕಾಣಬೇಕು ಎಂದೇ ಬಯಸುತ್ತಾಳೆ. ಕಾರಣಕ್ಕಾಗಿ ಪವಿತ್ರ ಇಸ್ಲಾಂ ಮಹಿಳೆಯರಿಗೆ ಚಿನ್ನ ಹಾಗೂ ಬೆಳ್ಳಿ ಯ ಆಭರಣಗಳನ್ನು ಸಮ್ಮತಗೊಳಿಸಿತು.
ಆಭರಣಗಳನ್ನು ಧರಿಸುವಾಗ ಎಷ್ಟರ ತನಕ ಅವಳಿಗೆ ಸೌಂದರ್ಯ ದೊರಕುತ್ತದೆ ಯೋ ಅಷ್ಟು ಆಭರಣಗಳನ್ನು ಅವಳು ಧರಿಸಬಹುದು. ಯಾವಾಗ ವಿರೂಪವಾಗುತ್ತದೆಯೋ ಆಗ ಕರಾಹತ್ ಹಾಗೂ ಕೆಲವೊಮ್ಮೆ ನಿಷಿದ್ಧ ವೂ ಆಗುತ್ತದೆ. ಹೀಗೆ ಕರಾಹತ್ ಅಥವಾ ನಿಷಿದ್ಧ ವಾಗುವಾಗ ಅದರಲ್ಲಿ ಝಕಾತ್ ಕಡ್ಡಾಯ ವಾಗುತ್ತದೆ. ಇದಾಗಿದೆ ಅದರ ಮಾನದಂಡ.

ಸೌಂದರ್ಯ ದ ಮಿತಿಯನ್ನು ಹಾದು ವಿರೂಪದ ಮಟ್ಟಕ್ಕೆ ತಲುಪುವಾಗ ಇದನ್ನು ಇಸ್ರಾಫ್ ಆಗಿ ಪರಿಗಣಿಸಲಾಗುತ್ತದೆ. ಈ ಇಸ್ತಾಫನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ. *ಒಂದು: ಸಮಾನ್ಯ ಇಸ್ರಾಫ್,* ಇದು ಆಭರಣಗಳಲ್ಲಿ ಕರಾಹತ್ ಆಗಿದೆ. *ಎರಡು: ಮಿತಿ ಮೀರಿದ ಇಸ್ರಾಫ್,* ಇದು ನಿಷಿದ್ಧ ವಾಗಿದೆ. ಎರಡೂ ಸಂದರ್ಭಗಳಲ್ಲಿ ಝಕಾತ್ ಕಡ್ಡಾಯ ವಾಗುತ್ತದೆ.
ಒಟ್ಟಿನಲ್ಲಿ ಒಬ್ಬಳು ಧರಿಸುವ ಚಿನ್ನಾಭರಣಗಳಿಂದ ಎಲ್ಲಿಯ ತನಕ ಸೌಂದರ್ಯ ದೊರಕುತ್ತದೋ ಅಷ್ಟು ಚಿನ್ನಾಭರಣಗಳನ್ನು ಅವಳು ಧರಿಸಬಹುದು.ಅದು ಧರ್ಮ ಸಮ್ಮತವಾದ ಆಭರಣ ಗಳಾಗಿದ್ದು ಅದರಲ್ಲಿ ಝಕಾತ್ ಕಡ್ಡಾಯ ವಾಗಲಾರದು. ಆಭರಣಗಳು ಹೆಚ್ಚಾಗಿ ಸೌಂದರ್ಯದ ಹದ್ದು ಮೀರಿ ವಿರೂಪವಾಗುವುದಾದರೆ ಅದು ಇಸ್ರಾಫ್ ನ ಹಂತಕ್ಕೆ ತಲುಪಿರುವುದರಿಂದ ಅದರಲ್ಲಿ ಝಕಾತ್ ಕಡ್ಡಾಯ ವಾಗುವುದು. ಸಂಕ್ಷಿಪ್ತ ವಾಗಿ ಹೇಳುವುದಾದರೆ ಇದರ ಮಾನದಂಡ ಝೀನತ್ ಅಥವಾ ಸೌಂದರ್ಯ ಲಭಿಸುತ್ತದೆಯೋ ಇಲ್ಲವೇ ಎಂಬುವುದಾಗಿದೆ. ಈ ಬಗ್ಗೆ ತಿಳಿಸುವ ಕರ್ಮಶಾಸ್ತ್ರ ವಿದ್ವಾಂಸರ ಉಲ್ಲೇಖಗಳನ್ನು ನೋಡಿ.

ಚಿನ್ನದ ಒಂದು ಜೋಡಿ ಕಾಲು ಬಳೆ (ಚೈನ್) ಯ ತೂಕವು ಇನ್ನೂರು ಮಿಸ್ ಕಾಲ್ *(200×4.25=850 ಗ್ರಾಂ/ 106.25 ಪವನ್)* ತಲುಪಿದರೆ ಅದು ಇಸ್ರಾಫ್ ನ ಹಂತಕ್ಕೆ ತಲುಪಿದೆ ಎಂದು ಕೆಲವು ಕರ್ಮಶಾಸ್ತ್ರ ವಿದ್ವಾಂಸರು ತಿಳಿಸಿದ್ದಾರೆ. ಆಗ ಕೆಲವು ವಿದ್ವಾಂಸರು ಕಾಲು ಬಳೆ ಬೆಳ್ಳಿಯದ್ದಾಗಿದರೆ 200 ಮಿಸ್ ಕಾಲ್ ತಲುಪಿದರೆ ಮಾತ್ರ ಇಸ್ರಾಫ್ ಆಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣ ಚಿನ್ನ ಬೆಳ್ಳಿ ಗಿಂತ ಹೆಚ್ಚು ಬೆಲೆ ಬಾಳುವ ಲೋಹವೆಂದಾಗಿದೆ. ಆದರೆ ಈ ಹೇಳಿಕೆಯನ್ನು ಖಂಡಿಸುತ್ತಾ

 ಇಮಾಮ್ ಇಬ್ನು ಹಜರಿಲ್ ಹೈತಮಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ:

وذلك لانتفاء الزينة عنه المجوزة لهن التحلي، بل ينفر الطبع منه. كذا قالوه، وبه يعلم ضابط السرف

*"ಇಲ್ಲಿ ಚಿನ್ನ ಮತ್ತು ಬೆಳ್ಳಿ ಯ ಮಧ್ಯೆ ಬೆಲೆ ಬಾಳುವಿಕೆಯ ವ್ಯತ್ಯಾಸ ಹೇಳಲು ಸಾಧ್ಯವಿಲ್ಲ. ಏಕೆಂದರೆ 200 ಮಿಸ್ ಕಾಲ್ ಗಿಂತ ಹೆಚ್ಚಿರುವ ಕಾಲ್ಬಳೆಯಲ್ಲಿ ಮಹಿಳೆಯರಿಗೆ ಚಿನ್ನಾಭರಣ ಸಮ್ಮತಾರ್ಹವಾಗಲು ಕಾರಣ ವಾದ ಸೌಂದರ್ಯ ಎಂಬುವುದು ಇರುವುದಿಲ್ಲ. ಹೊರತು ಮನುಷ್ಯ ರು ಅದನ್ನು ಅಸಹ್ಯ ಪಡುವರು. ಇದರಿಂದ ಇಸ್ರಾಫ್ ನ ಮಾನದಂಡ ವನ್ನು ತಿಳಿದು ಕೊಳ್ಳಬಹುದು."* (ತುಹ್ಫಾ 3/308,309)

ಝೀನತ್ ಅಥವಾ ಸೌಂದರ್ಯ ಇದೆಯೇ..? ಇಲ್ಲವೇ..? ಎಂಬುವುದಾಗಿದೆ ಇಸ್ರಾಫ್ ನ ಮಾನದಂಡವೆಂದು ಇಮಾಮ್ *ಇಬ್ನು ಹಜರಿಲ್ ಹೈತಮಿ ರಹ್ಮತುಲ್ಲಾಹಿ ಅಲೈಹಿ ರವರು ಇಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಝೀನತ್ ಇದ್ದರೆ ಇಸ್ರಾಫ್ ಅಲ್ಲವೆಂದು ಝೀನತ್ ನಷ್ಟ ಹೊಂದಿ ವಿರೂಪದ ಮಟ್ಟಕ್ಕೆ ತಲುಪಿದರೆ ಅದು ಇಸ್ರಾಫ್ ಆಗುತ್ತದೆ. ಎಂಬುವುದಾಗಿದೆ ಇದರ ಸಾರಾಂಶ.*

ಇಮಾಮ್ ರಂಲೀ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ:

 المقتضي لإباحة الحلي لها التزيين للرجال المحرك للشهوة الداعي لكثرة النسل

*"ಮಹಿಳೆಯರಿಗೆ ಆಭರಣ ಸಮ್ಮತಾರ್ಹವಾಗಲು ಕಾರಣ ಪುರುಷರಿಗೆ (ಪತಿಗೆ) ಸೌಂದರ್ಯ ವತಿಯಾಗಿ ಕಾಣುವುದರ ಮೂಲಕ ಪತಿಯ ಕಾಮವನ್ನು ಕೆರಳಿಸಿ ಹೆಚ್ಚು ಮಕ್ಕಳನ್ನು ಉತ್ಪಾದಿಸುವುದಾಗಿದೆ."* (ನಿಹಾಯ: 94/3)

ಇದೇ ಮಾತನ್ನು
 ಇಮಾಮ್ ಝಕರಿಯ್ಯಲ್ ಅನ್ಸಾರಿ ರಹ್ಮತುಲ್ಲಾಹಿ ಅಲೈಹಿ ತನ್ನ ಮನ್ ಹಜ್ 51/2 ರಲ್ಲೂ..

ಅಸ್ನಲ್ ಮತ್ವಾಲಿಬ್ 165/2 ರಲ್ಲೂ ಕಾಣಬಹುದು.

ಇಮಾಮ್ ಶಿರ್ಬಿನಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ:

لأن المباح ما يتزين به

*"ಮಹಿಳೆಯರಿಗೆ ಸಮ್ಮತಾರ್ಹವಾದದ್ದು ನೀಡುವಂತದ್ದಾಗಿದೆ."* (ಮುಗ್ನೀ 393/1)

ಇದೇ ಮಾತನ್ನು ಇಮಾಮ್ ದಮೀರೀ ರಹ್ಮತುಲ್ಲಾಹಿ ಅಲೈಹಿ ರವರು ತನ್ನ ಅನ್ನಜ್ಮುಲ್ ವಹ್ಹಾಬ್ 199/3 ರಲ್ಲೂ ಹೇಳಿದ್ದಾರೆ.

ಇಮಾಮ್ ಶರ್ವಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ:

*" ಇಸ್ರಾಫ್ ನಿಂದ ಉದ್ದೇಶಿಸುವುದು ಸಾಮಾನ್ಯವಾಗಿ ಸೌಂದರ್ಯ ನೀಡುವ ಗಾತ್ರಕ್ಕಿಂತ ಲೂ ಹೆಚ್ಚಿನ ರೀತಿಯಲ್ಲಿ ನಿರ್ಮಿಸುವುದಾಗಿದೆ."*
(ಶರ್ವಾನೀ :309/3)

ಇದೇ ಕಾರ್ಯವನ್ನು ಬುಜೈರಿಮೀ 51/2 ರಲ್ಲೂ ಕಾಣಬಹುದು.

ಒಟ್ಟಿನಲ್ಲಿ ಆಭರಣ ವು ಮಹಿಳೆಗೆ ಸೌಂದರ್ಯ ನೀಡುವಷ್ಟಿದ್ದರೆ ಅದು ಸಮ್ಮತಾರ್ಹವಾದುದರಿಂದ ಅದರಲ್ಲಿ ಝಕಾತ್ ಕಡ್ಡಾಯ ವಾಗಲಾರದು. ಆ ಮಟ್ಟವನ್ನು ಮೀರಿ ವಿರೂಪವಾಗುವ ಹಂತಕ್ಕೆ ತಲುಪಿದರೆ ಅದು ಕರಾಹತ್ ಅಥವಾ ಹರಾಮ್ ಆಗುವುದರಿಂದ ಅದರಲ್ಲಿ ಝಕಾತ್ ಕಡ್ಡಾಯವಾಗುವುದು.

ಈ ವಿವರಣೆ ಯಿಂದ ಐವತ್ತೋ ಅಥವಾ ನೂರೋ ಪವನ್ ಗಳಿದ್ದರೆ ಝಕಾತ್ ಕಡ್ಡಾಯ ವಾಗಲಾರದು ಎಂದು ಸ್ಪಷ್ಟವಾಗುತ್ತದೆ. ಕಾರಣ ನೂರ್ ಪವನ್ ಚಿನ್ನಾಭರಣಗಳು ಸೌಂದರ್ಯ ಮಟ್ಟವನ್ನು ದಾಟಿ ವಿರೂಪವಾಗುವ ಮಟ್ಟಕ್ಕೆ ತಲುಪಲಾರದು. ಏಕೆಂದರೆ ಒಬ್ಬ ಮಹಿಳೆಯು ಗಟ್ಟಿಯಾದ ರೀತಿಯಲ್ಲಿ ಮಾಲೆ, ಕಿವಿಯ ಆಭರಣ, ನೆಕ್ಲೆಸ್, ಕೈ ಬಳೆ, ಕಾಲಿನ ಬಳೆ, ಸೊಂಟದ ಆಭರಣ, ಉಂಗುರಗಳನ್ನು ನಿರ್ಮಿಸಿದರೆ ಅದು ನೂರು ಪವನ್ ಗಿಂತಲೂ ಹೆಚ್ಚಾಗಬಹುದು. ಇವುಗಳನ್ನು ಧರಿಸಿದರೆ ಸಾಮಾನ್ಯವಾಗಿ ಯಾವುದೇ ಅಂದ ಕೆಡುವಿಕೆ ಉಂಟಾಗುವುದಿಲ್ಲ.

ಮಾತ್ರ ವಲ್ಲ, ಮಹಿಳೆಯರಿಗೆ ಯಾವುದೆಲ್ಲಾ ಆಭರಣಗಳನ್ನು ಧರಿಸಬಹುದೆಂದು ಕರ್ಮಶಾಸ್ತ್ರ ವಿದ್ವಾಂಸರು ವಿವರಿಸಿದ್ದಾರೆ.

 ಇಮಾಮ್ ಇಬ್ನು ಹಜರಿಲ್ ಹೈತಮಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುವುದನ್ನು ನೋಡಿ.

*"ಚಪ್ಪಲಿ, ಕಾಲ್ಬಳೆ,ಬಳೆ,ಉಂಗುರ, ಮಾಲೆ ಮುಂತಾದ ಚಿನ್ನ ಹಾಗೂ ಬೆಳ್ಳಿ ಯ ಆಭರಣಗಳು ಮಹಿಳೆಗೆ ಧರ್ಮ ಸಮ್ಮತವಾಗಿದೆ."* (ತುಹ್ಫಾ, ಮಿನ್ಹಾಜ್ ಸಹಿತ 307-3)

ಪುನಃ ಅವರು ಹೇಳುತ್ತಾರೆ:

*"ಅದೇ ರೀತಿ ಚಿನ್ನ ಮತ್ತು ಬೆಳ್ಳಿಯ ನೂಲಿನಿಂದ ಉಂಟು ಮಾಡಿದ ವಸ್ತ್ರ ವೂ ಅವಳಿಗೆ ಧರ್ಮ ಸಮ್ಮತವಾಗಿದೆ."* (ತುಹ್ಫಾ 308-3)

ಇಮಾಮ್ ನವವೀ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ:

*"ಮಾಲೆ, ನಕ್ಲೇಸ್, ತೋಲ್ಬಳೆ,ಕಾಲ್ಬಳೆ, ಕೈಬಳೆ, ಉಂಗುರ ಮುಂತಾದ ಆಭರಣ ಗಳನ್ನು ಧರಿಸುವುದು ಮಹಿಳೆಯರಿಗೆ ಧರ್ಮ ಸಮ್ಮತವೆಂದು ಮುಸ್ಲಿಮರು ಒಮ್ಮತಾಭಿಪ್ರಾಯವನ್ನು ತಾಲಿದ್ದಾರೆ."*
 (ಶರಹುಲ್ ಮುಅದ್ಸಬ್: 33-6)

ಫತ್ಹುಲ್ ಮುಈನ್ ನಲ್ಲಿ ಹೇಳುವುದನ್ನು ನೋಡಿ:

*"ಮಹಿಳೆಯರು ಕಿರೀಟ ಧರಿಸುವುದು ಧರ್ಮ ಸಮ್ಮತವಾಗಿದೆ. ಕಿರೀಟ ಧರಿಸುವ ವಾಡಿಕೆ ಇಲ್ಲದಿದ್ದರೂ ಸರಿ"* (ಫತ್ಹುಲ್ ಮುಈನ್ :167)

ನೋಡಿ ಮಹಿಳೆಯರು ಚಿನ್ನದ ಮಾಲೆ, ಕೈ ಬಳೆ, ತೋಲ್ಬಳೆ, ಕಾಲ್ಬಳೆ,ಉಂಗುರ ಮುಂತಾದ ಆಭರಣಗಳನ್ನು ಧರಿಸಬಹುದೆಂದು ವಿದ್ವಾಂಸರು ಸ್ಪಷ್ಟ ಪಡಿಸುತ್ತಾರೆ.ಎಲ್ಲಿಯವರೆಗೆಂದರೆ ಚಿನ್ನದ ವಸ್ತ್ರ, ಚಿನ್ನದ ಚಪ್ಪಲಿ, ಚಿನ್ನ ದ ಕಿರೀಟ ಮುಂತಾದವುಗಳನ್ನು ಧರಿಸಬಹುದೆಂದು ತಿಳಿಸಿದ್ದಾರೆ. ಚಿನ್ನದ ವಸ್ತ್ರ ಉಂಟು ಮಾಡುವುದಾದರೆ ಅದಕ್ಕೆ ನೂರು ಪವನ್ ಸಾಕಾಗಬಹುದಾ..? ಅದೇ ರೀತಿ ಚಿನ್ನದ ಮೆಟ್ಟು ಮತ್ತು ಕಿರೀಟದಲ್ಲಿ ಎಷ್ಟು ಪವನ್ ಚಿನ್ನ ಇರಬಹುದು..? ಮಾಲೆ, ಬಳೆ,ಕಾಲ್ಬಳೆ, ತೋಲ್ಬಳೆ, ನಕ್ಲೇಸ್,ಕಿವಿಯ ಆಭರಣ, ಚಪ್ಪಲಿ, ಕಿರೀಟ, ವಸ್ತ್ರ ಮುಂತಾದವುಗಳು ಕೇವಲ ನೂರು ಪವನ್ ಚಿನ್ನದಲ್ಲಿ ಹುದುಗುತ್ತದಾ..?ಆದ್ದರಿಂದ ನೂರು ಪವನ್ ಚಿನ್ನ ವಿದ್ದರೆ ಝಕಾತ್ ನೀಡಬೇಕೆಂದು ಹೇಳುವುದು ಸರಿಯಲ್ಲ.

*ಸಂಕ್ಷಿಪ್ತವಾಗಿ ಹೇಳುವುದಾದರೆ ಮಹಿಳೆಯು ಧರಿಸುವ ಚಿನ್ನ ದಿಂದ ಅವಳಿಗೆ ಎಲ್ಲಿಯ ತನಕ ಝೀನತ್ ಅಥವಾ ಸೌಂದರ್ಯ ದೊರಕುತ್ತದೆಯೋ ಅಲ್ಲಿಯ ತನಕ ಝಕಾತ್ ಕಡ್ಡಾಯವಾಗಲಾರದು.ಝೀನತ್ ಹೋಗಿ ಅಂದಗೆಡುವಿಕೆ ಉಂಟಾದರೆ ಅದರಲ್ಲಿ ಝಕಾತ್ ಕಡ್ಡಾಯ ವಾಗುತ್ತದೆ. ಇದಾಗಿದೆ ಅದರ ಮಾನದಂಡ.*
▪▪▪▪
🔭 *ನಿಸಾರ್ ಸಖಾಫಿ ಉಳ್ಳಾಲ*

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.