ಇತಿಹಾಸ ಪ್ರಸಿದ್ಧ ಉಳ್ಳಾಲ ಖುತುಬುಝ್ಝಮಾನ್ ಅಸ್ಸೆಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ. ಮತ್ತು ಕೇಂದ್ರ ಜುಮಾ ಮಸೀದಿ (402) ಇದರ ಆಡಳಿತ ಸಮಿತಿಗೆ 2016-17 ನೇ ಸಾಲಿನಲ್ಲಿ ನ್ಯಾಯಯುತವಾದ ಚುನಾವಣೆ ನಡೆಯದೆ ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ ಅಬ್ದುಲ್ ರಶೀದ್ ಮತ್ತು ಸಹವರ್ತಿಗಳು ಕಳೆದ ಮೂರುವರೆ ವರ್ಷದಿಂದ ಕಾನೂನು ಉಲ್ಲಂಘನೆ, ಅವ್ಯವಹಾರ, ಭ್ರಷ್ಟಾಚಾರ, ದಬ್ಬಾಳಿಕೆ, ಸರ್ವಾಧಿಕಾರ ಮತ್ತು ಸಮಾಜಘಾತುಕ ಶಕ್ತಿಗಳ ಪೋಷಣೆಯನ್ನು ನಡೆಸುತ್ತಾ ಬಂದಿದೆ. ಇವೆಲ್ಲವನ್ನು ಮನಗಂಡು ಸರಕಾರದ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು,ಉಳ್ಳಾಲ ದರ್ಗಾ ಆಡಳಿತ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶವನ್ನು
(KSBW/MSC/08/DKD/2016/-17)
ದಿನಾಂಕ 21-11-2019 ಗುರುವಾರ ದಂದು ಹೊರಡಿಸಿದೆ. ಇದನ್ನು ಉಳ್ಳಾಲದ ಮಹಾ ಜನತೆಯು ಸ್ವಾಗತಿಸುತ್ತದೆ.
ಆದರೆ ಅಧಿಕಾರ ದಾಹಿಗಳಾದ ಉಚ್ಚಾಟಿತ ಅಬ್ದುಲ್ ರಶೀದ್ ನೇತೃತ್ವದ ಅನಧಿಕೃತ ಆಡಳಿತ ಸಮಿತಿ ಮತ್ತು ಅವರ ಕೆಲವು ಬೆಂಬಲಿಗರು,
ಗಲಭೆಗಳಿಗೆ ಪ್ರಚೋದನೆ ನೀಡಿ ಜನರಿಗೆ ವಕ್ಫ್ ಕಾಯ್ದೆ ಮತ್ತು ಆದೇಶದ ಬಗ್ಗೆ ತಪ್ಪು ಮಾಹಿತಿ ನೀಡಿ ಸರಕಾರದ ಆದೇಶವನ್ನು ಉಲ್ಲಂಘಿಸಿ, ಆಡಳಿತಾಧಿಕಾರಿಯನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಬಹಿರಂಗವಾಗಿ ಕರೆ ನೀಡಿದರು. ಆದ್ದರಿಂದ ಇವರವಿರುಧ್ಧ ಐಪಿಸಿ ಕಲಂ 186 & 188 ಪ್ರಕಾರ ಕೇಸು ದಾಖಲಿಸಿ ಕ್ರಮಜರುಗಿಸುವಂತಾಗಬೇಕು.
ಇವರ ಅದಕ್ಷ ಅಸಮರ್ಪಕ, ಕಾನೂನು ಬಾಹಿರ ಮತ್ತು ಭ್ರಷ್ಟಾಚಾರಿ ಆಡಳಿತ ವೈಖರಿಯು ಈ ರೀತಿ ಇವೆ.
ಒಂದನೆಯದಾಗಿ, ನ್ಯಾಯಯುತವಾದ ಚುನಾವಣೆ ನಡೆಯಲು ಬಿಡದೆ ಅಧಿಕಾರವನ್ನು ವಶಪಡಿಸಿದ ಸ್ವಘೋಷಿತ ಅಧ್ಯಕ್ಷ ಅಬ್ದುಲ್ ರಶೀದ್ ನೇತೃತ್ವದ ಆಡಳಿತ ಮಂಡಳಿಯು ಉಳ್ಳಾಲದಲ್ಲಿ ಸಮಾಜ ಘಾತುಕ ಶಕ್ತಿಗಳ ಮೂಲಕ ಅಟ್ಟಹಾಸ ಮೆರೆದು ಈ ಸಂಘರ್ಷದಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳು ಉಳ್ಳಾಲ ಪೊಲೀಸ್ ಠಾಣೆಯಯಲ್ಲಿ ದಾಖಲಾಗಿರುತ್ತದೆ.
2.ವಕ್ಫ್ ಇಲಾಖೆಯಲ್ಲಿ ನೋಂದಾಯಿತವಾದ, ಮಂಗಳೂರು ಪಂಪ್ವೆಲ್ ಬಳಿಯಿರುವ ಕೋಟಿ ಬೆಲೆ ಬಾಳುವ ಜಾಗ ಮತ್ತು ಅದರಲ್ಲಿರುವ ಕಟ್ಟಡವನ್ನು (ಸರ್ವೇ ನಂ: 24/3A1P25 4.5 ಸೆಂಟ್ಸ್ )ವಕ್ಫ್ ಇಲಾಖೆಯ ಅನುಮತಿಯಿಲ್ಲದೆ ಜುಜುಬಿ ಹಣಕ್ಕೆ ಮಾರಾಟ ಮಾಡಿದ್ದಾರೆ.
3.ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಹಿಂದಿನ ಆಡಳಿತ ಸಮಿತಿ ಹೊಸದಾಗಿ ತೆರೆದ ಸಯ್ಯಿದ್ ಮದನಿ ಬನಾತ್ ವುಮೆನ್ಸ್ ಪದವಿ ಕಾಲೇಜನ್ನು ಹೊಸ ಪ್ರವೇಶಾತಿಯನ್ನು ನೀಡದೆ ಮುಚ್ಚುವ ಹುನ್ನಾರ ಮಾಡಿದ್ದಾರೆ.
4.ಉಳ್ಳಾಲ ಒಂಭತ್ತುಕೆರೆಯಲ್ಲಿರುವ ಸೆಯ್ಯಿದ್ ಮದನಿ ತಾಂತ್ರಿಕ ತರಬೇತಿ ಸಂಸ್ಥೆಗೆ ಯಾವುದೋ ಹೊರಗಿನ ಸಂಸ್ಥೆಯ ಹೆಸರು (ಸೌತ್ ಕೆನೆರಾ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್)ಹಾಕಲಾಗಿದೆ.
ಇದರಲ್ಲಿ ಅಕ್ರಮ ಮತ್ತು ಕಾನೂನು ಉಲ್ಲಂಘನೆಯ ಶಂಕೆಯಿದೆ.
5. ಕರ್ನಾಟಕ ಸರಕಾರದ 2011ರ ಸುತ್ತೋಲೆ ಮತ್ತು ಕರ್ನಾಟಕ ವಕ್ಫ್ ಮಂಡಳಿಯ ನಿರ್ಣಯ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಇವುಗಳಿಗೆ ವಿರುದ್ಧವಾಗಿ ಮದ್ರಸಾ ಪಠ್ಯಪುಸ್ತಕಗಳನ್ನು ಬದಲಿಸಿ ಊರಿನಲ್ಲಿ ಗೊಂದಲ ,ಗಲಾಟೆಗಳಿಗೆ ಕಾರಣಕರ್ತರಾಗಿದ್ದಾರೆ.
6. ಇಸ್ಲಾಮಿಕ ರೂಡಿ ಪ್ರಕಾರ ಧಾರ್ಮಿಕ ವಿಚಾರದಲ್ಲಿ ಖಾಝಿ ತೀರ್ಮಾನವೇ ಅಂತಿಮವಾಗಿದ್ದರೂ, 2017ರ ಜುಲೈನಲ್ಲಿ ಆಚರಿಸಿದ ಈದ್-ಉಲ್-ಫಿತರ್, ಸನ್ಮಾನ್ಯ ಖಾಝಿಯವರ ಆದೇಶಕ್ಕೆ ವಿರುದ್ಧವಾಗಿ ದಿನ ನಿಗದಿಪಡಿಸಿ ಹಬ್ಬವನ್ನು ಒಂದು ದಿನ ಮುಂಚಿತವಾಗಿಯೇ ಆಚರಿಸುವಂತೆ ಮಾಡಿದ್ದಲ್ಲದೆ, ಹಬ್ಬ ಆಚರಿಸಲು ಮತ್ತು ಝಿಯಾರತ್ಗೆ ದರ್ಗಾಕ್ಕೆ ನಾಗರಿಕರು ಬಂದಾಗ, ಇತಿಹಾಸದಲ್ಲೇ ಮೊದಲ ಬಾರಿಗೆ ಮಸೀದಿ ಮತ್ತು ದರ್ಗಾಕ್ಕೆ ಬೀಗ ಜಡಿದು, ಪ್ರಶ್ನಿಸಿದವರ ಮೇಲೆ ಸುಳ್ಳು ಆರೋಪ ಹೊರಿಸಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡಿದ್ದಾರೆ.
7. ವಿನಾ ಕಾರಣ ಮದ್ರಸ ಅಧ್ಯಾಪಕರನ್ನು ವಜಾಮಾಡುವುದಲ್ಲದೆ ದರ್ಗಾದ ಅಧೀನದಲ್ಲಿರುವ 13 ಮದ್ರಸಗಳಿಗೆ ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸುಮಾರು ಒಂದು ಮುಕ್ಕಾಲು ಕೋಟಿಯಷ್ಟು ವೇತನವನ್ನು ಬಾಕಿಯಿರಿಸಿದ್ದಾರೆ. ಈ ಕುರಿತು ಮಾನ್ಯ ಜಿಲ್ಲಾಧಿಕಾರಿ, ವಕ್ಫ್ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಬಾಕಿಯಿರಿಸಿರುವ ಹಣವನ್ನು ಕೂಡಲೇ ಪಾವತಿ ಮಾಡುವಂತೆ ಅಧಿಕಾರಿಗಳು ಆದೇಶಿಸಿದ್ದರೂ ಅದನ್ನು ಸಂಪೂರ್ಣವಾಗಿ ಉಲ್ಲಂಘಿಸಿರುತ್ತಾರೆ.
8.ದರ್ಗಾದ ಅಧೀನದಲ್ಲಿರುವ ಶಾಲಾ-ಕಾಲೇಜುಗಳ ಫೀಸ್ ಹೆಚ್ಚಿಸಿದ ಹೊರತಾಗಿಯೂ ಅಧ್ಯಾಪಕ ವರ್ಗದವರಿಗೆ ತಿಂಗಳುಗಟ್ಟಲೆ ಸಂಬಳವನ್ನು ನೀಡದೆ ಸತಾಯಿಸಿರುವುದು. ಸರಿಸುಮಾರು 85 ಲಕ್ಷದಷ್ಟು ವೇತನವನ್ನು ಬಾಕಿಯಿರಿಸಿದ್ದಾರೆ. ಈ ಎಲ್ಲ ಕಾನೂನು ವಿರುದ್ಧ, ಅವ್ಯವಹಾರ, ಭ್ರಷ್ಟಾಚಾರ,ಮತ್ತು ದಮನ ನೀತಿಗಳನ್ನು ಯಾರಾದರೂ ಟೀಕಿಸಿದರೆ ಅಂಥವರನ್ನು , ದಮನಿಸಲು ಸುಪಾರಿ ರೌಡಿಗಳನ್ನಿಟ್ಟು ಸದ್ದಡಗಿಸುತ್ತಾರೆ ಮತ್ತು ಹಣಬಲದಿಂದ ಪ್ರಭಾವಿ ವ್ಯಕ್ತಿಗಳನ್ನು ಬಳಸಿ ತಮ್ಮ ವಿರುಧ್ಧ ಸರಕಾರ ಮತ್ತು ವಕ್ಫ್ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿರುತ್ತಾರೆ.
9. ಉಚ್ಚಾಟಿತ ಅಧ್ಯಕ್ಷ ರಶೀದ್ ರವರು ಉಳ್ಳಾಲ ದರ್ಗಾ ಸಮಿತಿಗೆ ರಾಜ್ಯ ವಕ್ಫ್ ಮಂಡಳಿ ಸುಮಾರು 1.70 ಕೋಟಿ ಸೆಸ್ ವಿಧಿಸಲು ವಿರೋಧಿಗಳ ಷಡ್ಯಂತ್ರ ಕಾರಣ ಎಂದು ಬೇಜವಾಬ್ದಾರಿಯುತ ಮತ್ತು ಸುಳ್ಳಾರೋಪ ಮಾಡಿದ್ದು, ಈ ಬೃಹತ್ ಮೊತ್ತದ ಸೆಸ್ ವಿಧಿಸಲು ಮಾನ್ಯ ವಕ್ಫ್ ಮಂಡಳಿಯ 2016 ವಕ್ಪ್ ಕಾಯ್ದೆ (ತಿದ್ದುಪಡಿ) ಮತ್ತು ಇವರ ಅವ್ಯವಹಾರ ಶಂಕಿಸಿ ಜಿಲ್ಲಾ ವಕ್ಫ್ ಬೋರ್ಡ್ ದಿನಾಂಕ 30.10.2017 ರಂದು ದರ್ಗಾ ಕಚೇರಿಗೆ ಅಗಮಿಸಿ ಲೆಕ್ಕಪರಿಶೋಧನೆ ನಡೆಸಿದ್ದು, ಈ ವೇಳೆ ರಶೀದ್ ನೇತೃತ್ವದ ಉಚ್ಚಾಟಿತ ಆಡಳಿತ ಸಮಿತಿ ಬೇಜಾವಾಬ್ದಾರಿಯುತವಾಗಿ ನೀಡಿದ ತಪ್ಪು ಲೆಕ್ಕಗಳೇ ಕಾರಣವಾಗಿರಬಹುದು. ತಮ್ಮ ತಪ್ಪುಗಳನ್ನು ಸಮರ್ಥಿಸಲು ವಿಪಕ್ಷವನ್ನು ದೂರುವ ಕೆಟ್ಟ ಚಾಳಿಯನ್ನು ಇವರು ಹೊಂದಿದ್ದಾರೆ.
ಅದಲ್ಲದೆ, ಸರಕಾರದ ಆದೇಶದಂತೆ ದಿನಾಂಕ 25-11-2019 ಉಳ್ಳಾಲ ದರ್ಗಾದ ಆಡಳಿತಾಧಿಕಾರಿಯಾಗಿ ಇಬ್ರಾಹಿಂ ಗೂನಡ್ಕರವರು ಅಧಿಕಾರ ಸ್ವೀಕರಿಸಿದ್ದಾರೆ.
ಆದರೆ ದರ್ಗಾದ ದಾಖಲೆಗಳನ್ನು,ಕೀಲಿಕೈಗಳನ್ನು ಮತ್ತು ವಾಹನಗಳನ್ನು ಹಸ್ತಾಂತರಿಸದ ಕಾರಣ, 27-11-2019 ರಂದು ಬುಧವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ 02-12-2019 ರಂದು ಸೋಮವಾರ 11 ಗಂಟೆಗೆ ಶಾಂತಿಯುತವಾಗಿ ಪ್ರಸ್ತುತ ದಾಖಲೆಗಳು ಮತ್ತು ಇನ್ನಿತರ ವಸ್ತುಗಳನ್ನು ಹಸ್ತಾಂತರ ಮಾಡುವುದಾಗಿ ಎಸಿ ಯವರಲ್ಲಿ ಹೇಳಿಕೆ ನೀಡಿ ಬಂದ ಉಚ್ಚಾಟಿತ ಸಮಿತಿಯು, ಮಾನ್ಯ ರಾಜ್ಯ ವಕ್ಫ್ ಬೋರ್ಡ್ ಇದರ "ಆಡಳಿತಾಧಿಕಾರಿ ನೇಮಕದ" ಆದೇಶವನ್ನು ಉಳ್ಳಾಲದ ಜನತೆಯ ಮುಂದೆ ತಪ್ಪಾಗಿ ಬಿಂಬಿಸಿ, ಬಿಜೆಪಿ ನೇತೃತ್ವದ ಸರಕಾರವವು ಉಳ್ಳಾಲ ದರ್ಗಾವನ್ನು ಸ್ವಾಧೀನಪಡಿಸಲೆತ್ನಿಸುತ್ತಿದೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ನೀಡಿ, ಜನರನ್ನು ಆತಂಕಕ್ಕೀಡು ಮಾಡಿ ಉದ್ರೇಕಿಸಲು ಪ್ರಯತ್ನ ಪಟ್ಟಿರುತ್ತಾರೆ. ಹಾಗೂ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮ ಗಳಿಗೆ ಕೂಡ ಸುಳ್ಳು ಮಾಹಿತಿಯನ್ನು ನೀಡಿ ಗೊಂದಲಗಳಿಗೆ ಕಾರಣರಾಗಿದ್ದಾರೆ.
ದಿನಕ್ಕೊಂದು ರೀತಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ, ಪತ್ರಕರ್ತರನ್ನು ಮತ್ತು ಜನ ಸಾಮಾನ್ಯರನ್ನು ಇವರು ದಾರಿತಪ್ಪಿಸುತ್ತಿದ್ದಾರೆ. ಉಳ್ಳಾಲದ ಸಮಸ್ತ ಮುಸ್ಲಿಂ ಬಾಂಧವರು ಆರಿಸಿದ ಖಾಝಿಯವರನ್ನು ಬದಲಾಯಿಸುತ್ತೇವೆಂದು ಹೇಳಿ ಊರಿನಲ್ಲಿ ಭಿನ್ನತೆ ಅಶಾಂತಿ ಮತ್ತು ಗಲಭೆಗೆ ಪ್ರೇರಣೆ ನೀಡಿದ್ದಾರೆ. ದರ್ಗಾ ಮತ್ತು ಅಧೀನ ಸಂಸ್ಥೆಗಳು ಸರಕಾರ ನೇಮಿಸಿದ ಆಡಳಿತಾಧಿಕಾರಿ ಯ ಅಧಿಕಾರಕ್ಕೊಳಪಟ್ಟಿರುವಾಗ ತಮಗೆ ಆಡಳಿತಾತ್ಮಕ ನಿರ್ಧಾರವನ್ನು ಕೈಗೊಳ್ಳಲು ಯಾವುದೇ ಹಕ್ಕಿಲ್ಲವೆಂಬುದನ್ನು ಇವರು ಮರೆತು ಬಿಟ್ಟಿದ್ದಾರೆ.
ಉಳ್ಳಾಲ ದರ್ಗಾ ಮತ್ತು ಅಧೀನ ಸಂಸ್ಥೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ, ಮೊಹಲ್ಲ-ವಿವಿಧ ಮದ್ರಸ, ಶಾಲಾ ಕಾಲೇಜುಗಳ ಅಧ್ಯಾಪಕರಿಗೆ ಬಾಕಿಯಿರಿಸಿರುವ ವೇತನವನ್ನು ಶೀಘ್ರ ಪಾವತಿಯಾಗುವಂತೆ ನೋಡಿಕೊಳ್ಳಬೇಕಾಗಿ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಸಿ ಉತ್ತಮ ಆಡಳಿತ ಸಮಿತಿ ರೂಪಿಸಿಕೊಡಬೇಕಾಗಿ ಈ ಮೂಲಕ ಮಾನ್ಯ ವಕ್ಫ್ ಮಂಡಳಿ ಮತ್ತು ಉಳ್ಳಾಲ ದರ್ಗಾ ಆಡಳಿತಾಧಿಕಾರಿಗಳಲ್ಲಿ ವಿನಂತಿಸುತ್ತಿದ್ದೇವೆ.
ಧನ್ಯವಾದಗಳೊಂದಿಗೆ
ಉಪಸ್ಥಿತಿ :
1. ಪಿ.ಎಸ್. ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಅಲ್-ಕಾಮಿಲ್, ಅಧ್ಯಕ್ಷರು - ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಉಳ್ಳಾಲ
2. ಅಬ್ದುಲ್ ಹಮೀದ್ ಮಂಚಿಲ, ಪ್ರಧಾನ ಕಾರ್ಯದರ್ಶಿ
3. ಜನಾಬ್ ಅಶ್ರಫ್ ಸುಂದರಿಭಾಗ್, ಕೋಶಾಧಿಕಾರಿ
4. ರಿಯಾಝ್ ಅಳೇಕಲ, ಸಮತಿ ಸದಸ್ಯರು
5. ಇಜಾಝ್ ಮದನಿನಗರ, ಸಮಿತಿ ಸದಸ್ಯರು
